‘ಮಯೂರ’ ಹಾಸ್ಯ - ಭಾಗ ೬೩

‘ಮಯೂರ’ ಹಾಸ್ಯ - ಭಾಗ ೬೩

ಸಣ್ಣ ಕಾರ್ಖಾನೆಗಳು

ತರಗತಿಯಲ್ಲಿ ವಾಯುಮಾಲಿನ್ಯದ ದುಷ್ಪರಿಣಾಮಗಳ ಕುರಿತು ಪಾಠ ಮಾಡುತ್ತಿದ್ದೆ. ಕಾರ್ಖಾನೆ, ವಾಹನಗಳ ದಟ್ಟ ಹೊಗೆ ವಾಯುಮಾಲಿನ್ಯಕ್ಕೆ ಕಾರಣ. ಹಾಗೆಯೇ ಈ ಧೂಮಪಾನಿಗಳೂ ಸಹ ‘ಸಣ್ಣ ಕಾರ್ಖಾನೆಗಳಂತೆ' ವಾಯು ಮಾಲಿನ್ಯಕ್ಕೆ ಕಾರಣರಾಗುತ್ತಾರೆಂದು ಹೇಳಿದೆ. ಸಂಜೆ ಮನೆಗೆ ತೆರಳುವಾಗ ನನ್ನ ಮುಂದೆ ಕೆಲವು ಅಡಿಗಳ ದೂರದಲ್ಲಿ ಮಕ್ಕಳು ಗುಂಪಾಗಿ ಮುನ್ನಡೆಯುತ್ತಿದ್ದರು. ರಸ್ತೆ ಬದಿಯ ಸಾರ್ವಜನಿಕ ಕಟ್ಟೆಯ ಮುಂದೆ ಹಿರಿಯರೊಬ್ಬರು ಬೀಡಿ ಸೇದುತ್ತಾ ಕುಳಿತಿದ್ದರು. ಆ ಹಿರಿಯರನ್ನು ನೋಡಿದ ಮಕ್ಕಳು ಪಿಸುಮಾತಿನಲ್ಲಿ ‘ಸಣ್ಣ ಕಾರ್ಖಾನೆ, ಸಣ್ಣ ಕಾರ್ಖಾನೆ' ಎನ್ನುತ್ತ ಗೊಳ್ಳೆಂದು ನಗುತ್ತಾ ಮುಂದೆ ಹೋದದ್ದನ್ನು ನೋಡಿ ಮುಜುಗರದ ನಡುವೆಯೂ ನಗೆಯುಕ್ಕಿತು. 

-ಮಹೇಶ್ವರ ಹುರುಕಡ್ಲಿ

***

ಡಿಸೈನ್ ಬಟ್ಟೆ ತಗೊ

ನನ್ನ ನೆಂಟರೊಬ್ಬರ ಮನೆಯ ಹುಡುಗಿ ಏರ್ ಫೋರ್ಸ್ ನಲ್ಲಿ ಕೆಲಸಕ್ಕೆ ಸೇರಿದ್ದಳು. ತನ್ನ ಕಚೇರಿಗೆ ಹತ್ತಿರವೇ ಬಾಡಿಗೆ ಮನೆ ಹಿಡಿದಳು. ಆ ಮನೆಯೊಡತಿಗೆ ಹುಡುಗಿ ಒಬ್ಬಳೇ ಹೀಗೆ ಮನೆಯವರಿಂದ ದೂರವಿದ್ದು, ಕೆಲಸಕ್ಕೆ ಹೋಗುವುದನ್ನು ಕಂಡು ಅನುಕಂಪ ಮತ್ತು ಕುತೂಹಲ. ಪ್ರತಿ ದಿನ ಬೆಳಿಗ್ಗೆ ಗೇಟಿನ ಬಳಿ ನಿಂತು ಆ ಹುಡುಗಿಗೆ ಕೈಬೀಸಿ ಬೀಳ್ಕೊಡುತ್ತಿದ್ದಳು. ಒಂದು ತಿಂಗಳು ಕಳೆಯಿತು. ಮೊದಲ ತಿಂಗಳ ಸಂಬಳ ಬಂದ ಬಳಿಕ ಆ ಹುಡುಗಿ ಬಾಡಿಗೆ ಹಣ ಕೊಡಲು ಹೋದಾಗ ಆಕೆ ‘ಬೇಡಮ್ಮ, ಇದನ್ನು ನೀನೇ ಇಟ್ಟುಕೊ. ಪ್ರತಿ ದಿನ ಒಂದೇ ಬಟ್ಟೆ ಹಾಕ್ಕೊಂಡು ಹೋಗೋದು ನೋಡಿ ಪಾಪ ಅನಿಸುತ್ತೆ... ಈ ರೊಕ್ಕದಲ್ಲಿ ಹೊಸ ಡಿಸೈನ್ ಬಟ್ಟೆ ತಗೊ. ಆಯ್ತಾ?’ ಎನ್ನುತ್ತ ಬಾಯಿತುಂಬಾ ನಕ್ಕಳಂತೆ.

-ಹಾಡ್ಯ ಬ.ಜಯಾನಂದ

***

ಕಬ್ಬಿನ ರಸ

ನನ್ನ ಮೂರು ವರ್ಷದ ಮಗ ಪ್ರಣವ್ ಬೆಂಗಳೂರಿನಲ್ಲಿ ಕಬ್ಬಿನ ರಸವನ್ನು ತುಂಬಾ ಇಷ್ಟ ಪಟ್ಟು ಕುಡಿಯುತ್ತಿದ್ದ. ಅದು ಅವನ ದಿನಚರಿಯಾಗಿತ್ತು. ಯಂತ್ರದಿಂದ ರಸ ಹೊರಬರುವುದನ್ನು ಗಮನವಿಟ್ಟು ನೋಡುತ್ತಿದ್ದ. ರಜೆಗೆ ಅಜ್ಜನ ಮನೆಗೆ ಹೋದಾಗ ಇವನ ಇಷ್ಟವನ್ನರಿತ ಅಜ್ಜ ಸಾಕಷ್ಟು ಕಬ್ಬು ತಂದರು. ನಾನೂ ಸಂಭ್ರಮದಿಂದ ಕಬ್ಬು ಸುಲಿದು ಕೊಡತೊಡಗಿದೆ. ಅದನ್ನು ಜಗಿದು ತಿನ್ನುತ್ತಾ ಪ್ರಣವ್ ಕೇಳಿದ ‘ಅಮ್ಮಾ, ಇದರಲ್ಲಿ ಯಾರೋ ಕಬ್ಬಿನ ರಸವನ್ನು ಹಾಕಿದ್ದಾರೆ ಅನ್ಸುತ್ತೆ ! ಯಾರಿರಬಹುದು?’ ಎಂದು ಕೇಳಿದಾಗ ನನ್ನ ಮುಖಚರ್ಯೆ ಹೇಗಿರಬಹುದೆಂದು ಊಹಿಸಿ !

-ಅನುಪಮಾ ಕೆ, ಬೆಣಚಿನಮರ್ಡಿ

***

ಓದೋರು ಯಾರು?

ಇದು ಬಹಳ ವರ್ಷಗಳ ಹಿಂದೆ ನಾಗಮಂಗಲದ ಬೆಳ್ಳೂರಿನ ಹತ್ತಿರದ ಹಳ್ಳಿ ದಡಿಗದಲ್ಲಿರುವ ನಮ್ಮ ಅಜ್ಜಿಯ ನೆಂಟರಾದ ಶಾಮಯ್ಯಂಗಾರ್ ಮನೆಗೆ ಹೋದಾಗ ನಡೆದ ಘಟನೆ. ಅಜ್ಜಿ ಹಾಗೂ ಶ್ಯಾಮಯ್ಯಂಗಾರರು ಲೋಕಾರೂಢಿ ಮಾತಾಡುತ್ತಾ ಕೂತಿದ್ದಾಗ ಒಬ್ಬ ರೈತ ಬಂದು ‘ಸ್ವಾಮಿ, ತಹಶೀಲ್ದಾರರಿಗೆ ಒಂದು ಅರ್ಜಿ ಬರೆದುಕೊಡಿ' ಅಂದ. ಇವರು ‘ಬರೀಬೋದಿತ್ತು. ಆದರೆ ಮೊನ್ನೆ ಬಚ್ಚಲ್ ಮನೇಲಿ ಜಾರಿಬಿದ್ದು, ಕಾಲು ಉಳಕೋಗೈತೆ. ನಡೆಯೋಕೆ ಆಗಕಿಲ್ಲ ಕನ' ಅಂದರು. ಅವನು ನಕ್ಕು ‘ಆಯ್ತು ಬುಡಿ, ನಾನೇ ಓಗಿ ಸಾಯಿ, ನಿಬ್ಬು ತತ್ತೀನಿ, ಬರಕೊಡೋವ್ರಂತೆ.’ ಅಂತ ಎದ್ದ. ಇವರು ‘ತಡೀಲ, ಬರೆದು ಕೊಟ್ಟೇನು. ಅದನ್ನು ಓದೋದು ಯಾರ್ಲ? ನಾನು ಬರೆದಿದ್ದು ನನಗೇ ಓದಾಕಾಗಾಕಿಲ್ಲ. ಕಾಲು ಸರಿ ಆದ ಮೇಲೆ ಆಫೀಸ್ಗೆ ನಾನೇ ಬಂದು ಬರ್ಕೊಟ್ಟು ಅವರಿಗೆ ಓದಿ ಹೇಳ್ತೀನಿ' ಅಂದರು !

-ಕೆ. ಎಸ್. ಶ್ರೀ ಶೈಲನ್

***

(ಮೇ ೨೦೨೧ರ ‘ಮಯೂರ’ ಪತ್ರಿಕೆಯಿಂದ ಆಯ್ದದ್ದು)