ಸಿಎಂ ಸಿದ್ದರಾಮಯ್ಯ ಬಜೆಟ್ ವಿರುದ್ಧ ಟೀಕಾಪ್ರಹಾರ ನಡೆಸಿದ ಮಾಜಿ ಸಿಎಂ ಹೆಚ್.ಡಿಕೆ.

ಬೆಂಗಳೂರು,ಫೆಬ್ರವರಿ,16,2024(www.justkannada.in): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಬಗ್ಗೆ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು,  ನಾನು ಹೇಳುವುದೆಲ್ಲ ಸತ್ಯ ಎನ್ನುವ ಸಿದ್ದರಾಮಯ್ಯ ಬರೀ ಸುಳ್ಳು ಹೇಳುತ್ತಿದ್ದಾರೆ. ಕೇವಲ ಕೇಂದ್ರ ಸರ್ಕಾರವನ್ನು ನಿಂದನೆ ಮಾಡಿ ಮೆಚ್ಚುಗೆ ಪಡೆಯಲು ಹೊರಟಿದ್ದಾರೆ  ಎಂದು ಟೀಕಾ ಪ್ರಹಾರ ನಡೆಸಿದರು.

ಬಜೆಟ್ ವಿರುದ್ಧ ಬಿಜೆಪಿ ಜೆಡಿಎಸ್ ಪಕ್ಷಗಳು ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ರಾಜ್ಯದಲ್ಲಿ 15ನೇ ಬಜೆಟ್ ಮಂಡಿಸಿರುವ ದಾಖಲೆ ಬಗ್ಗೆ ಚರ್ಚೆ ಆಗುತ್ತಿದೆ. ದೇಶದಲ್ಲಿ ಅಮೃತಕಾಲದ ಬಗ್ಗೆ ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ ಬಜೆಟ್ ನೋಡಿದರೆ ಅಮೃತಕಾಲ ಅಲ್ಲ, ವಿನಾಶಕಾಲಕ್ಕೆ ನಾಂದಿ ಆಗಿದೆ ಎನ್ನಬಹುದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಬಜೆಟ್ ನಿಜಕ್ಕೂ ವಿನಾಶಕ್ಕೆ ದಾರಿ ಮಾಡಿಕೊಡುವ ಬಜೆಟ್ ಆಗಿದೆ. ಈಗಾಗಲೇ ಜಂಟಿ ಅಧಿವೇಶನದಲ್ಲಿ ಹಲವಾರು ಸುಳ್ಳುಗಳನ್ನು ರಾಜ್ಯಪಾಲರಿಂದ ಹೇಳಿಸಿದ್ದಾರೆ. ಬಜೆಟ್ ಕೂಡ ಸುಳ್ಳುಗಳಿಂದ ಕೂಡಿದೆ ಎಂದು ಅವರು ಆರೋಪ ಮಾಡಿದರು.

ಪರಿಷತ್ತಿನಲ್ಲಿ ಸಿದ್ದರಾಮಯ್ಯ ಅವರು ನಾನೇಳೋದೆಲ್ಲಾ ಸತ್ಯ ಅಂದಿದ್ದಾರೆ. ನೂರು ಬಾರಿ ಸುಳ್ಳು ಹೇಳಿ, ಅದನ್ನೇ ಸತ್ಯ ಮಾಡ್ತೀವಿ ಅಂತಾರೆ.. ಹಾಗೆ ಮಾಡಿದ್ದಾರೆ ಈ ಬಜೆಟ್ ನಲ್ಲಿ. ಪ್ರತಿ ವಿಷಯದಲ್ಲಿ, ಅದರಲ್ಲಿಯೂ ನೀರಾವರಿ ವಿಚಾರದಲ್ಲಿ ಕೇಂದ್ರದ ಮುಂದೆ ಹೋಗ್ತೀವಿ ಅಂತಾರೆ. ಅಭಿವೃದ್ಧಿ ವಿಚಾರಕ್ಕೂ ಕೇಂದ್ರದ ಮುಂದೆ ಹೋಗ್ತೀವಿ ಅಂತಾರೆ. ಹಾಗಂತ ಬಜೆಟ್ ನಲ್ಲಿ ಹೇಳಿಕೊಂಡಿದ್ದಾರೆ. ನೋಡಿದರೆ ಎಲ್ಲೆಡೆ ನಿಂದನೆ ಮಾಡಿದ್ದಾರೆ ಎಂದರು.

ಕಳೆದ ಮೂರು ವರ್ಷದ ಅವಧಿಯಲ್ಲಿ ಬಿಜೆಪಿ ಆಡಳಿತದಲ್ಲಿ ಯಾವ ಯೋಜನೆ ರೂಪಿಸಿದ್ದರು, ಅದೇ ಯೋಜನೆಯಗಳನ್ನೇ ಮತ್ತೆ ಉಲ್ಲೇಖ ಮಾಡಿದ್ದಾರೆ. ಇವರಲ್ಲಿ ಯಾವುದೇ ಹೊಸ ವಿಚಾರ, ಅಭಿವೃದ್ಧಿ ಯಾವುದೂ ಇಲ್ಲ. ಹಿಂದಿನ ಸರ್ಕಾರದ ಕಾರ್ಯಕ್ರಮ ಹೇಳಿಕೊಂಡಿದ್ದಾರೆ ವಿನಾ, ಯಾವುದೇ ಹೊಸ ವಿಚಾರ ಇಲ್ಲ ಎಂದು ಟೀಕಿಸಿದರು.

ತೆಲಂಗಾಣ, ಆಂಧ್ರದ ಜತೆ ಸಮಾಲೋಚನೆ ಮಾಡುತ್ತೇವೆ ಎಂದರು. ಇದುವರೆಗೆ ಯಾವುದೇ ಚರ್ಚೆಯೂ ಆಗಲಿಲ್ಲ. ಮೇಕೇದಾಟಿಗೆ ಪಾದಯಾತ್ರೆ ಮಾಡಿದ್ದೂ, ಮಾಡಿದ್ದೆ. ಅಧಿಕಾರಕ್ಕೆ ಬಂದರೂ ಏನೂ ಮಾಡಲಿಲ್ಲ. ತಪ್ಪು ಮಾಡಿರೋದು ಇವರು. 15ನೇ ವೇತನ ಆಯೋಗದಲ್ಲಿ ರಾಜ್ಯಕ್ಕೆ 3 ಸಾವಿರ ಕೋಟಿ ರೂಪಾಯಿ ಅನುದಾನ ಇಟ್ಟಿದ್ದರೂ ಸಹ ಏನು ಕೊಡಲಿಲ್ಲ ಎಂದು ದೂರಿದ್ದಾರೆ ಎಂದು ಕುಮಾರಸ್ವಾಮಿ ಅವರು ಹರಿಹಾಯ್ದರು.

ಕೇಂದ್ರ ಸರಕಾರ ಹಣ ಕೊಡಲಿಲ್ಲ ಅಂತಾರೆ, ಹಾಗಾದರೆ ಇವರ ಕಾರ್ಯಕ್ರಮ ಏನು? ದಿನವೂ ಬೆಳಗ್ಗೆ ಪತ್ರಿಕೆ ತೆಗೆದರೆ ಐದು ಗ್ಯಾರಂಟಿ ಜತೆಗೆ ಇವರ ಮುಖವೂ ಇರಲೇಬೇಕು. ವಿನಾಶ ಕಾಲ ಏನಿದೆ, ಈ ಬಜೆಟ್‌ನಲ್ಲಿ ಇದೆ. 14 ಬಜೆಟ್ ಕೊಟ್ಟಿರುವ ಸಿದ್ದರಾಮಯ್ಯ ಅವರು 15ನೇ ಬಜೆಟ್ ನಲ್ಲಿ ಏನೂ ಕೊಟ್ಟಿಲ್ಲ. ಇದನ್ನು ನೋಡಿದರೆ ಸಿದ್ದರಾಮಯ್ಯ ಅವರ ಬಜೆಟ್ ಅಲ್ಲ, ಬೇರೆಯವರ ಬಜೆಟ್ ಅನ್ನೋದು ಸ್ಪಷ್ಟವಾಗಿದೆ ಎಂದು ಕುಮಾರಸ್ವಾಮಿ ಅವರು ಟೀಕಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಸೇರಿದಂತೆ ಜೆಡಿಎಸ್ ಪಕ್ಷದ ಶಾಸಕರೆಲ್ಲರೂ ಹಾಜರಿದ್ದರು.

Key words: Former CM- HD Kumaraswamy- criticized -CM Siddaramaiah-budget.